Thursday, December 3, 2009

ನೊಂದ ಹುಡುಗನು ಮನದಾಳದ ಮಾತು

ನಿನಗೆ ಕೊಡಲು ನನ್ನ ಬಳಿ ಇರುವುದು ಪ್ರೀತಿ ಮಾತ್ರ


ಹುಡುಗಿ ನಾನು ನಿನಗೆ ಏನು ಗಿಪ್ಟ್ ಕೊಡಲಿ? ನಿನಗೆ ಏನು ಕೊಟ್ಟರೂ ಕಡಿಮೆಯೇ. ಹಾಗಂತ ಏನೂ ಕೊಡದೇ ಇರುವುದಕ್ಕೂ ನನ್ನ ಮನಸ್ಸು ಒಪ್ಪುತ್ತಿಲ್ಲ. ಏನು ಕೊಡಲಿ ಎಂದು ನಿನ್ನನ್ನು ಕೇಳಿದರೆ ಅದನ್ನು ನೀನು ಬಾಯಿ ಬಿಟ್ಟು ಏನೂ ಹೇಳುತ್ತಿಲ್ಲ. ದೀಪ ಹಚ್ಟಿದಂತಿರುವ ನಿನ್ನ ರೂಪಕ್ಕೆ ಹಾಲು ಬೆಳದಿಂಗಳನ್ನು ಹಿಡಿದು ಕೊಟ್ಟರೂ ಕಡಿಮೆಯೇ.


ಕನಸುಗಳನ್ನು ಪೋಣಿಸಿ ವಾಸ್ತವ ಮರೆಸುತ್ತಿಲ್ಲ. ಅಂದವೆಂದರೆ ನೀನೆ ಅಂದುಕೊಂಡಿರುವ ನಾನು ನಿನಗೆ ಅಪೂರ್ವವಾದದೊಂದು ಉಡುಗೊರೆಯನ್ನು ಕೊಡದಿದ್ದರೆ ಹೇಗೆ? ಆಯ್ಕೆಯಲ್ಲಿ ಸ್ಪಲ್ಪ ಹೆಚ್ಚು ಕಡಿಮೆಯಾದರೂ, ನೀನೆಲ್ಲಿ ಮುನಿಸಿಕೊಳ್ಳುತ್ತೀಯಾ ಎನ್ನುವ ಹುಚ್ಚು ಹಂಬಲ, ಹಪಹಪಿ. ಕಂಜೂಸು ಹುಡುಗಾ ಮಾತು ಸಾಕು. ಕಿಸೆ ಮಾತ್ರ ಖಾಲಿಯಿದ್ದರೂ ನಿನ್ನ ಕನಸು ಮಾತ್ರ ಭಾರಿ ದೊಡ್ಡದು ಎನ್ನುತ್ತೀಯಾ? ಕನಸು ಕಾಣುವುದಕ್ಕೆ ದುಡ್ಡು ಕೊಡಬೇಕಿಲ್ಲವಲ್ಲಾ?

ಆದರೆ ಇದು ಕನಸಲ್ಲ. ನಿನಗೆ ಗೊತ್ತಾ? ನೀನು ಬೆಚ್ಚಗೆ ಪುಸ್ತಕದೊಳಗಿಟ್ಟು ಕೊಟ್ಟಿದ್ದ ನವಿಲುಗರಿಯನ್ನು ಇಂದಿಗೂ ನನ್ನ ಪಾಲಿನ ನಿಧಿಯಂತೆ ಕಾದಿಟ್ಟುಕೊಂಡಿದ್ದೇನೆ. ಅದರೊಳಗೆ ನಿನ್ನ ಬೆರಳಿನ ಬೆವರ ಹನಿಯ ನವಿರು ವಾಸನೆ ಇಂದಿಗೂ ಜೀವಂತವಾಗಿದೆ. ನಿಷ್ಕಲ್ಮಶ ಪ್ರೀತಿಯ ಮುತ್ತು ಪೋಣಿಸಿ ನೀನು ತೋರಿದ ಪ್ರೀತಿಗೆ, ಅದರ ರೀತಿಗೆ ನನ್ನ ಕಣ್ಣ ಹನಿಗಳೇ ಕಾಣಿಕೆ.

ನೋಡು ಹುಡುಗಿ, ಮೊನ್ನೆ ನಾನು ಟಿವಿ ನೋಡುತ್ತಿದ್ದೆ. ವಿಶ್ವದ ಏಳು ಅದ್ಭುತಗಳ ಪಟ್ಟಿಗೆ ತಾಜ್ ಮಹಲ್ ಆಯ್ಕೆಯಾಗಿದೆ ಎನ್ನುವ ಸುದ್ದಿ ಬಂದದ್ದೇ ತಡ ನನಗೆ ನಿನ್ನ ನೆನಪಾಯಿತು. ಅಮರ ಪ್ರೇಮದ ದೃಶ್ಯಕಾವ್ಯ ತಾಜ್ ಮಹಲ್. ಮಂಜು ಸುರಿದ ಮುಂಜಾವಿನಲ್ಲಿ ನೊರೆ ಹಾಲಿನಂತೆ ಕಾಣುವ ತಾಜ್ ಮಹಲ್‌ನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಅಪೂರ್ವ ಅನುಭವ. ಅದು ಕೂಡ ನಿನ್ನ ಹಾಗೆ ಬೆಳದಿಂಗಳ ಬಾಲೆ. ನಿನ್ನನ್ನು ಹೊಗಳಿ ಅಟ್ಟಕ್ಕೇರಿಸುವ ಪ್ರಯತ್ನ ಮಾಡುತ್ತಿಲ್ಲ.

ಪ್ರೀತಿಸುವವರ ಎದೆಯಲ್ಲಿ ತಾಜ್ ಮಹಲ್‌ಗೊಂದು ವಿಶಿಷ್ಠ ಸ್ಥಾನವಿದೆ. ಅವರ ಎದೆ ಬಡಿತ ಕೂಡ ಯಮುನಾ ನದಿಯ ನೀರ ಅಲೆಗಳಂತೆ ಮಧುರವಾಗಿರುತ್ತದೆ. ನೀನು ಒಮ್ಮೊಮ್ಮೆ ಗೆಜ್ಜೆ ಸದ್ದಿನೊಂದಿಗೆ ಬರುತ್ತೀಯಲ್ಲ ಹಾಗೆ. ನಿನ್ನ ಕಣ್ಣುಗಳಲ್ಲಿ ಮೂಡುವ ತಾಜ್‌ಮಹಲಿನ ಬಿಂಬ ನನ್ನ ಕಲ್ಪನೆಯ ಮಹಲಿನೊಳಗೆ ಮಮ್ತಾಜ್ ಆಗಬಯಸುವ ನಿನ್ನ ಹಪಹಪಿ ನನಗರ್ಥವಾಗದೇ ಇರುತ್ತದೆಯಾ?

ನನಗೆ ನಿನ್ನಂತೆ ತಾಜ್ ಮಹಲ್ ಇಷ್ಟವಾಗುವುದು ಯಾಕೆ ಗೊತ್ತಾ? ಅದರ ಸ್ನಿಗ್ದ ಸೌಂದರ್ಯಕ್ಕೆ ಮತ್ತು ಪರಿಶುಧ್ದತೆಗೆ. ಸ್ನಾನ ಮಾಡಿ ಮಲ್ಲಿಗೆ ಮುಡಿದು ನಿಂತ ಅಪ್ಸರೆಯಂತೆ ಅದು ಶುಭ್ರ. ನಿರಾಭರಣ ಸುಂದರಿ. ಅಲಂಕಾರ ಬೇಕಿಲ್ಲ. ಆಡಂಬರ ಬೇಕಿಲ್ಲ. ಸರ್ವಕಾಲಿಕ ಯೌವನೆ. ತಾಜ್ ಮಹಲ್ ಕಂಬಗಳನ್ನು ಮುಟ್ಟಿದರೂ ಸಾಕು, ಮುಟ್ಟಿದ ವ್ಯಕ್ತಿಯ ಕೈಗೆ ಪ್ರೀತಿಯ ಹುಡಿ ಹತ್ತಿಕೊಳ್ಳುತ್ತದೆ ಎನ್ನುತ್ತಾರೆ ಪ್ರೀತಿಸುವ ಹೃದಯಗಳು. ತಾಜ್ ಮಹಲ್‌ನ ಎದುರಿಗೆ ನಿಂತು ತಮ್ಮ ಪ್ರೀತಿಯನ್ನು ಪಿಸುಗುಟ್ಟಿದರೆ ಸಾಕು, ತಾವು ಇಷ್ಟಪಟ್ಟವರು ತಮಗೆ ಸಿಗುತ್ತಾರೆ ಎನ್ನುವುದು ಮತ್ತೊಂದು ನಂಬಿಕೆ .

ಹುಡುಗಿ, ನಂಬಿಕೆ ಮತ್ತು ಪ್ರತೀತಿಗಳು ಏನೇ ಇರಲಿ, ಅಸಂಖ್ಯ ಹೃದಯಗಳ ಪ್ರೀತಿಯನ್ನು ಹೊತ್ತು ನಿಂತಿದೆ ತಾಜ್ ಮಹಲ್. ಶಹಜಾನ್ ಕಟ್ಟಿದಂತೆ ನಿನಗಾಗಿ ನಾನು ತಾಜ್ ಮಹಲ್ ಕಟ್ಟಿಸಲು ಆಗದೇ ಇರಬಹುದು. ಆದರೆ ನನ್ನ ಎದೆಯಲ್ಲಿ ನಿನ್ನ ನೆನಪುಗಳ ಮಹಲ್ ಕಟ್ಟಿದ್ದೇನೆ. ಮುಂಜಾನೆ ಸುರಿಯುವ ಸ್ಪಟಿಕ ಮಂಜಿನಂತೆ ಅದು ಪರಿಶುದ್ಧ. ಯಾವುದೇ ವಾಂಛೆಯಿಲ್ಲದೆ ಕಟ್ಟಿಕೊಂಡಿರುವ ನಿನ್ನ ನೆನಪುಗಳಲ್ಲಿ ಪ್ರೀತಿಯ ಭರಪೂರವೇ ಇದೆ.

ನಿನ್ನನ್ನು ಉಸಿರುಗಟ್ಟಿಸದೆ, ಕಾಡಿಸದೆ, ಪೀಡಿಸದೆ ನಿನಗೆ ಕೊಡಲು ನನ್ನ ಬಳಿ ಇರುವ ಗಿಫ್ಟ್ ಪ್ರೀತಿ ಮಾತ್ರ. ಅದೆಲ್ಲಾ ಬೇಡ, ಬೇರೆ ಏನೂ ಕೊಡುಸುವುದಿಲ್ಲವಾ ಅಂದರೆ, ತಾಜ್ ಮಹಲ್ ಕೊಡಿಸುತ್ತೇನೆ. ಆದರೆ ಎಲ್ಲಿ ಕೈಜಾರಿ ಬಿದ್ದರೆ ನನ್ನ ಪ್ರೀತಿ ಒಡೆದು ಹೋದೀತು ಎನ್ನುವ ಕಳವಳ. ಎದೆಯ ಗೂಡೊಳಗೆ ಬೆಚ್ಚಗೆ ಬಚ್ಚಿಟ್ಟು ಒಡೆಯುವುದಿಲ್ಲವೆಂದು ಮಾತು ಕೊಟ್ಟರೆ ಕೊಡಿಸಲು ಪ್ರಯತ್ನಿಸುತ್ತೇನೆ. ಆದರೆ ನನ್ನ ಪ್ರೀತಿಗಿಂತ ಅದು ದೊಡ್ಡದಾ?

No comments:

Post a Comment